ಪ್ರಸ್ತುತ ಜಲಾಶಯದ ಒಳ ಹರಿವಿನ ಪ್ರಮಾಣ 16,936 ಕ್ಯುಸೆಕ್ ಇದ್ದು, ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಇದೇ ಪ್ರಮಾಣದಲ್ಲಿ ನೀರು ಹರಿದು ಬಂದರೆ ಈ ವರ್ಷ ಜೂನ್‌ನಲ್ಲೇ ಕಟ್ಟೆ ಭರ್ತಿಯಾಗುವ ಸಾಧ್ಯತೆಯಿದೆ. ಕಳೆದ ವರ್ಷ ಜು.11ರಂದೇ ಜಲಾಶಯದ ನೀರಿನ ಮಟ್ಟ 124 ಅಡಿ ತಲುಪಿದರೂ ನಾನಾ ಕಾರಣಗಳಿಂದಾಗಿ ಅಣೆಕಟ್ಟೆಯನ್ನು ಸಂಪೂರ್ಣ ಭರ್ತಿ(124.80 ಅಡಿ) ಮಾಡಿಸಿರಲಿಲ್ಲ. ಜು.25ರಂದು ಕಟ್ಟೆ ಭರ್ತಿಯಾಗಿತ್ತು.
ಕಳೆದ ವರ್ಷ ಬರೋಬ್ಬರಿ 154 ದಿನಗಳ ಕಾಲ (ಜು.25ರಿಂದ ಡಿ.25ರವರೆಗೆ) ಜಲಾಶಯದಲ್ಲಿ ಗರಿಷ್ಠ ಪ್ರಮಾಣದವರೆಗೆ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲಾಗಿತ್ತು. ಅದಕ್ಕೂ ಹಿಂದೆ 2022ರಲ್ಲಿ ಜೂನ್ ಅಂತ್ಯದಲ್ಲೇ ಜಲಾಶಯ ಭರ್ತಿಯಾಗಿತ್ತು. ಅದರಂತೆ ಮೂರು ವರ್ಷಗಳ ಬಳಿಕ ಮತ್ತೆ ಈ ವರ್ಷ ಜೂನ್‌ನಲ್ಲೇ ಜಲಾಶಯ ಭರ್ತಿಯಾಗುವ ನಿರೀಕ್ಷೆ ಮೂಡಿಸಿದೆ.
ಮೇನಲ್ಲಿ ಗರಿಷ್ಠ ನೀರು
ಕಳೆದ 30 ವರ್ಷಗಳಲ್ಲಿ ಮೇ ತಿಂಗಳಲ್ಲಿ ದಾಖಲೆಯ ಪ್ರಮಾಣದ ನೀರು ಕನ್ನಂಬಾಡಿಕಟ್ಟೆಗೆ ಹರಿದುಬಂದಿದೆ. ಮೇ 26ರಂದು 89.35 ಅಡಿಯಿದ್ದ ಜಲಾಶಯದ ನೀರಿನ ಮಟ್ಟ ಮೇ 30ರಂದು 100.10 ಅಡಿಗೇರಿತ್ತು. ಕೇವಲ ನಾಲ್ಕು ದಿನಗಳ ಅಂತರದಲ್ಲಿ ಜಲಾಶಯದ ನೀರಿನ ಮಟ್ಟ ಸುಮಾರು 11 ಅಡಿಯಷ್ಟು ಏರಿಕೆಯಾಗಿತ್ತು.
ಆದರೆ, ಜಲಾಶಯದ ನೀರಿನ ಮಟ್ಟ 100ರಿಂದ 110 ಅಡಿ ತಲುಪಲು ಬರೋಬ್ಬರಿ 19 ದಿನಗಳನ್ನು ತೆಗೆದುಕೊಂಡಿದೆ. ಮೇ 30ರಂದು 100.10 ಅಡಿಯಿದ್ದ ಕಟ್ಟೆಯ ನೀರಿನ ಮಟ್ಟ ಜೂ.17ರಂದು ಬೆಳಗ್ಗೆ 110.95 ಅಡಿ ಮುಟ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ2120 ಕ್ಯುಸೆಕ್ ಒಳ ಹರಿವು, 461 ಕ್ಯುಸೆಕ್ ಹೊರ ಹರಿವಿನೊಂದಿಗೆ ಕಟ್ಟೆಯ ನೀರಿನ ಮಟ್ಟ 87 ಅಡಿ ದಾಖಲಾಗಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ಜಲಾಶಯದಲ್ಲಿ23.95 ಅಡಿಯಷ್ಟು ಹೆಚ್ಚು ನೀರು ಸಂಗ್ರಹವಾಗಿದೆ.
2024ರಲ್ಲಿ ಜು.17ರಂದು ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 110.60 ದಾಖಲಾಗಿತ್ತು. ಕಾಕತಾಳೀಯ ಎಂಬಂತೆ ಈ ವರ್ಷ ಜೂ.17ರಂದು 110.95 ಅಡಿ ತಲುಪಿದೆ. ಕಳೆದ ವರ್ಷಕ್ಕಿಂತ ಸರಿಯಾಗಿ ಒಂದು ತಿಂಗಳು ಮೊದಲೇ 100 ಅಡಿ ದಾಖಲಾಗಿ ಗಮನ ಸೆಳೆದಿದೆ.
ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 110 ಅಡಿ ತಲುಪಿರುವುದು ಖುಷಿಯ ಸಂಗತಿ. ಮಳೆ ಮತ್ತು ಒಳ ಹರಿವು ಗಮನಿಸಿದರೆ ಈ ಬಾರಿ ಕನ್ನಂಬಾಡಿಕಟ್ಟೆ ಬೇಗ ತುಂಬುವ ವಿಶ್ವಾಸವಿದೆ. ಅದೇ ರೀತಿ ಆದಷ್ಟು ಬೇಗ ನಾಲೆಗಳಿಗೆ ನೀರು ಹರಿಸಿದರೆ ಮುಂಗಾರು ಕೃಷಿ ಚಟುವಟಿಕೆಗಳು ಅನುಕೂಲವಾಗಲಿದೆ ಎಂದಿದ್ದಾರೆ ಡಿ.ಎಂ. ನಾಗರಾಜು, ರೈತ, ಮಂಗಲ, ಮಂಡ್ಯ ತಾ.
ಕಳೆದ ಐದು ವರ್ಷಗಳಲ್ಲಿ ಜೂ.17ರಂದು ನೀರಿನ ಮಟ್ಟ
ವರ್ಷ ಅಡಿಗಳು
2021 84.20
2022 105.66
2023 81.20
2024 87.00
2025 110.95